ಮೂರು ದಿನಗಳು, ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು, ಐದುನೂರಕ್ಕೂ ಹೆಚ್ಚು ಶಿಕ್ಷಕರು, ಮುನ್ನೂರಕ್ಕೂ ಹೆಚ್ಚು ವಿಷಯತಜ್ಞರು - ಗಾಯಕರು - ಕಲಾವಿದರು - ಸಾಹಿತಿಗಳು ಪಾಲ್ಗೊಳ್ಳುವ ಸಾಂಸ್ಕೃತಿಕ ಉತ್ಸವ "ಮಕ್ಕಳ ವಚನ ಮೇಳ" ದ ಪ್ರಾಯೋಜಕ - ಸಹಪ್ರಾಯೋಜಕರಾಗುವ ಸುವರ್ಣ ಅವಕಾಶ.
ಬನ್ನಿ, ಕೈಜೋಡಿಸಿ. ಇಂತಹ ಐತಿಹಾಸಿಕ ಉತ್ಸವದ ಪ್ರಾಯೋಜಕರಾಗಿ - ಸಹಪ್ರಾಯೋಜಕರಾಗಿ "ಮಕ್ಕಳ ವಚನ ಮೇಳ" ದ ಪಾಲುದಾರರಾಗಲು ಕೋರುತ್ತೇವೆ.
ಎಳೆಯ ಕಿರಿಯರಿಗೆ ವಚನಗಳನ್ನು ತಿಳಿಸಿ, ಅವರ ಮನಸ್ಸುಗಳಲ್ಲಿ ಪ್ರೀತಿ - ವಿಶ್ವಾಸ - ಅಕ್ಕರೆ - ವಾತ್ಸಲ್ಯ - ಅನುಬಂಧಗಳನ್ನು ಮನೆಮಾಡಿಸಿ, ಸಂಸ್ಕೃತಿಯ ಅನಾವರಣ ಮಾಡುವ ಮೂಲಕ ಒಳ್ಳೆಯ ವ್ಯಕ್ತಿತ್ವ, ಬೌದ್ಧಿಕ ಬೆಳವಣಿಗೆಯನ್ನು ಉಂಟು ಮಾಡುವ ಪ್ರಾಮಾಣಿಕ ಪ್ರಯತ್ನ ಮಕ್ಕಳ ವಚನ ಮೇಳ. ವಚನಜ್ಯೋತಿ ಬಳಗ ಮಕ್ಕಳಿಗಾಗಿಯೇ ಪ್ರತಿವರ್ಷ ಆಯೋಜಿಸುವ ಮೂರು ದಿನಗಳ ಮಕ್ಕಳ ವಚನ ಮೇಳದಲ್ಲಿ ವಚನ ಸ್ಪರ್ಧೆಗಳ ಮೂಲಕ ಮಕ್ಕಳ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣ . . .
ಇಲ್ಲಿ ಮಕ್ಕಳು ಹಾಡುತ್ತಾರೆ, ಬರೆಯುತ್ತಾರೆ, ಚಿತ್ರಿಸುತ್ತಾರೆ, ನರ್ತಿಸುತ್ತಾರೆ, ಕಥೆ ಹೇಳುತ್ತಾರೆ, ಭಾಷಣ ಮಾಡುತ್ತಾರೆ, ನಾಟಕ ಆಡುತ್ತಾರೆ, ವೇಷಭೂಷಣಗಳನ್ನು ಧರಿಸಿ ಸಂತೋಷಿಸುತ್ತಾರೆ. ದೇಸಿ ಚೆಲುವಿನ ಮಾತೃಭಾಷೆಯ ಪ್ರೀತಿ ಮಡಿಲಿನಲ್ಲಿ ವಚನಗಳನ್ನು ಅಪ್ಪಿಕೊಂಡು, ಅದರ ಸದಾಶಯಗಳನ್ನು ಅರಿತುಕೊಂಡು ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಾರೆ.
ಮಾಂಟೆಸರಿಯಿಂದ ಆರಂಭಿಸಿ ಹತ್ತನೇ ತರಗತಿಯವರೆಗಿನ ಮಕ್ಕಳು ಯಾವುದೇ ವರ್ಗ - ವರ್ಣ ಬೇಧವಿಲ್ಲದೆ ಮಕ್ಕಳ ವಚನ ಮೇಳದಲ್ಲಿ ಸಮಾಹಿತರಾಗುತ್ತಾರೆ. ಪುಟ್ಟ ಮಕ್ಕಳಿಗೆ ಎಳೆಯರೆಂದು, ೧ ಮತ್ತು ೨ನೇ ತರಗತಿ ಮಕ್ಕಳನ್ನು ಕಿರಿಯರೆಂದು, ೩ ಮತ್ತು ೪ನೇ ತರಗತಿಯ ಮಕ್ಕಳನ್ನು ಪೂರ್ವ ಪ್ರಾಥಮಿಕರೆಂದು, ೫,೬ ಮತ್ತು ೭ ತರಗತಿಗಳ ಮಕ್ಕಳನ್ನು ಪ್ರಾಥಮಿಕರೆಂದು, ೮, ೯ ಮತ್ತು ೧೦ನೇ ತರಗತಿ ಮಕ್ಕಳನ್ನು ಪ್ರೌಢರೆಂದು ವರ್ಗಿಕರಿಸಿ ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನ ಚಿತ್ರ, ವಚನ ನೃತ್ಯ, ವಚನ ಅಂತ್ಯಾಕ್ಷರಿ, ವಚನ ರಸಪ್ರಶ್ನೆ, ವಚನ ವೇಷಭೂಷಣ, ಸಮೂಹ ವಚನ ಗಾಯನ, ವಚನ ರೂಪಕ, ವಚನ ಕಥೆ ಮತ್ತು ವಚನ ಕಂಠಪಾಠಗಳೆಂದು ಹನ್ನೆರಡು ಪ್ರಕಾರಗಳಲ್ಲಿ ಮಕ್ಕಳ ವಚನ ಮೇಳ ನಡೆಯಲಿದೆ.
೨೦೧೯ರ ಜನವರಿ ೧೦, ೧೧ ಮತ್ತು ೧೨, ಮೂರು ದಿನಗಳ ಈ "ಮಕ್ಕಳ ವಚನ ಮೇಳ" ದಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೆ ಪ್ರಮಾಣಪತ್ರ ನೀಡುವುದಲ್ಲದೆ, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಮೂರು ದಿನವೂ ಭಾಗವಹಿಸುವ ಮಕ್ಕಳು, ಪೋಷಕರು, ಅಧ್ಯಾಪಕವರ್ಗ ಮತ್ತು ಪಾಲ್ಗೊಂಡ ಎಲ್ಲರಿಗೂ ಉಪಹಾರ ಮತ್ತು ಉಟೋಪಚಾರ ವ್ಯವಸ್ಥೆಯನ್ನು ಸಮಯದ ನಿಗದಿಯಿಲ್ಲದೆ ಬೆಳಗಿನಿಂದ ಸಂಜೆಯವರೆಗೂ ನೀಡಲಾಗುವುದು.
ನಾಡಿನ ಹೆಸರಾಂತ ಸಾಹಿತಿಗಳು - ವಿದ್ವಾಂಸರು - ಕಲಾವಿದರು - ಶಿಕ್ಷಣತಜ್ಞರು "ಮಕ್ಕಳ ವಚನ ಮೇಳ" ದಲ್ಲಿ ಪಾಲ್ಗೊಂಡು ಹರ್ಷಿಸಿದ್ದಾರೆ - ಸಂತೋಷಿಸಿ ಸಂಸ್ಕೃತಿಯ ಪ್ರಸರಣದಲ್ಲಿ ದಿಟ್ಟ - ದೊಡ್ಡ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವ "ಮಕ್ಕಳ ವಚನ ಮೇಳ" - ಇದೊಂದು ಅಭೂತಪೂರ್ವ ಸಾಂಸ್ಕೃತಿಕ ಉತ್ಸವ.
ಬನ್ನಿ, ಕೈಜೋಡಿಸಿ. ಇಂತಹ ಐತಿಹಾಸಿಕ ಉತ್ಸವದ ಪ್ರಾಯೋಜಕರಾಗಿ - ಸಹಪ್ರಾಯೋಜಕರಾಗಿ "ಮಕ್ಕಳ ವಚನ ಮೇಳ" ದ ಪಾಲುದಾರರಾಗಲು ಕೋರುತ್ತೇವೆ.
೧. ವಚನ ಗಾಯನ
೨. ವಚನ ಪ್ರಬಂಧ
೩. ವಚನ ವಿವೇಚನ
೪. ವಚನ ಚಿತ್ರ
೫. ವಚನ ಸಮೂಹ ಗಾಯನ
೬. ವಚನ ನೃತ್ಯ
೭. ವಚನ ರೂಪಕ
೮. ವಚನ ಅಂತ್ಯಾಕ್ಷರಿ
೯. ವಚನ ರಸಪ್ರಶ್ನೆ
೧೦. ವಚನ ವೇಷಭೂಷಣ
೧೧. ವಚನ ಕಥೆ
೧೨. ವಚನ ಕಂಠಪಾಠ
ಎಳೆಯರು : ಅಂಗನವಾಡಿ, ಶಿಶುವಿಹಾರ, ಎಲ್.ಕೆ.ಜಿ. ಯು.ಕೆ.ಜಿ. ಮಕ್ಕಳು
ಕಿರಿಯರು : ಒಂದು ಮತ್ತು ಎರಡನೇ ತರಗತಿಗಳ ಮಕ್ಕಳು
ಪೂರ್ವ ಪ್ರಾಥಮಿಕರು : ಮೂರು ಮತ್ತು ನಾಲ್ಕನೇ ತರಗತಿಗಳ ಮಕ್ಕಳು
ಪ್ರಾಥಮಿಕರು : ಐದು, ಆರು ಮತ್ತು ಏಳನೇ ತರಗತಿಗಳ ಮಕ್ಕಳು
ಪ್ರೌಢರು : ಎಂಟು, ಒಂಬತ್ತು ಮತ್ತು ಹತ್ತನೇ ತರಗತಿಗಳ ವಿದ್ಯಾರ್ಥಿಗಳು
ವಚನ ಗಾಯನ : ರಾಗ-ತಾಳ-ಭಾವದೊಂದಿಗೆ ವಚನ ಗಾಯನ. ಶೃತಿ ಶುದ್ಧಿ. ಕಂಚಿನ ಕಂಠದ ಅನಾವರಣ.
ವಚನ ಪ್ರಬಂಧ : ಮಕ್ಕಳ ಜ್ಞಾನಬಂಢಾರದ ವಿಸ್ತರಣೆಯೊಂದಿಗೆ ಸ್ಫುಟವಾಗಿ ಬರೆಯುವ ಕೌಶಲ್ಯ,ನೆನಪಿನ ಶಕ್ತಿ ಹೆಚ್ಚಳ, ವಿಷಯ ಸಂಪನ್ನತೆ, ನಿರೂಪಣಾ ಶೈಲಿ ಕರಗತ.
ವಚನ ಚಿತ್ರ : ಕಲ್ಪನಾಶಕ್ತಿಯ ವಿಕಾಸ, ಭಾವಗಳಿಗೆ ಬಣ್ಣ ತುಂಬಿ ಚಿತ್ರಿಸುವ ಕಲೆ, ವಚನಕಾರರ ಕುರಿತ ಸ್ಪಷ್ಟ ಚಿತ್ರಣ; ಮೌಲ್ಯಗಳ ಅರಿವು.
ವಚನ ವಿವೇಚನ : ವಿಷಯ ಸಂಗ್ರಹಣೆಯೊಂದಿಗೆ ನಿರ್ಭೀತವಾಗಿ ಮಂಡಿಸುವ ಕಲೆ, ಚಾತುರ್ಯ, ಮನೋಧೈರ್ಯ ಹೆಚ್ಚಳ; ಹೊಸ ಹೊಸ ಆಲೋಚನೆ - ವಿಚಾರಶಕ್ತಿಯ ಬೆಳವಣಿಗೆ, ಮಾತುಗಾರಿಕೆ ಮೈಗೂಡುವಿಕೆ.
ವಚನ ರಸಪ್ರಶ್ನೆ : ನೆನಪಿನ ಶಕ್ತಿ ಹೆಚ್ಚಳ, ಥಟ್ ಎಂದು ತಕ್ಷಣ ಉತ್ತರಿಸುವ ಕಲೆ, ಆಲೋಚನಾಶಕ್ತಿಯ ಬೆಳವಣಿಗೆ.
ವಚನ ನೃತ್ಯ : ವಚನಗಳ ಆಂತರಿಕ ಸತ್ವಕ್ಕೆ ಹೆಜ್ಜೆ ಗೆಜ್ಜೆಗಳ ಮೂಲಕ ಭಾವನೃತ್ಯ ಪ್ರದರ್ಶನ; ಅಭಿನಯ ಕೌಶಲ, ನೃತ್ಯಭ್ಯಾಸಿಗಳಿಗೆ ಒಂದು ಹೊಸ ವೇದಿಕೆ; ಪ್ರತಿಭೆಗೆ ಹೊಳಪು.
ವಚನ ರೂಪಕ : ವಚನಾಂದೋಲನದ ನೂರಾರು ಪ್ರಸಂಗಗಳಿಗೆ ರೂಪ ನೀಡುವ ಕಲೆ, ಸಂಭಾಷಣಾ ಚಾತುರ್ಯ ಹೆಚ್ಚಳ; ನೈತಿಕ ವ್ಯಕ್ತಿತ್ವದ ಬೆಳವಣಿಗೆ.
ವಚನ ವೇಷಭೂಷಣ : ವಚನ ಸಂಸ್ಕೃತಿಯ ಮನನ; ಸದಾಚಾರದ ಗಮನ, ನೈತಿಕ ಶಿಕ್ಷಕರಾದ ವಚನಕಾರರ ವೇಷಧಾರಣೆಯೊಂದಿಗೆ ಆರಾಧನೆ.
ಸಮೂಹ ವಚನ ಗಾಯನ : ಸಮೂಹದಲ್ಲಿ ಹಾಡುವುದರೊಂದಿಗೆ ಜೊತೆಗಾರರೊಂದಿಗೆ ಹೊಂದಾಣಿಕೆ; ಗಾಯನದಲ್ಲಿ ಪ್ರೌಢತೆ; ರಾಗ-ತಾಳ-ಹಾವ-ಭಾವ-ಶೃತಿ-ಲಯಗಳ ಅರಿವು.
ವಚನ ಅಂತ್ಯಾಕ್ಷರಿ : ಪದಕ್ಕೆ ಪದ ಕಟ್ಟುವ ಚಮತ್ಕಾರ; ಪದದೊಂದಿಗೆ ಅರ್ಥ ಕಲ್ಪನೆ, ಜ್ಞಾನಭಂಡಾರ ವೃದ್ಧಿ, ಆತ್ಮವಿಶ್ವಾಸ ಗಟ್ಟಿಗೊಳ್ಳುವಿಕೆ, ಸಂವಹನ ಶಕ್ತಿ ಹೆಚ್ಚಳ.
ವಚನ ಕಥೆ : ಕತೆ ಹೇಳುವ ಕೌಶಲ್ಯ - ಬೌದ್ಧಿಕ ವಿಕಾಸ, ವಚನಕಾರರ ವ್ಯಕ್ತಿತ್ವದ ಅರಿವು, ನಿರೂಪಣಾ ಚಾಕಚಕ್ಯತೆ, ಭಾಷೆಯ ಕಟ್ಟುವಿಕೆ - ಕಥಾ ಹಂದರದ ವಿಸ್ತರಣೆಯ ತಿಳಿವು.
ವಚನ ಕಂಠಪಾಠ : ಸರಣಿ ವಚನಗಳ ಮೂಲಕ ವಚನಕಾರರ ಸ್ಮರಣೆ, ನೆನಪಿನ ಶಕ್ತಿ ವೃದ್ಧಿ, ಭಾಷಾ ಸ್ಪಷ್ಟತೆ, ವಚನ ಕಟ್ಟುವ ಕಲೆಯ ವಿಸ್ತರಣೆ.