ಕಾಯಕಯೋಗಿ, ದಾಸೋಹ ಪ್ರೇಮಿ, ಮಹಾ ಶಿವಯೋಗಿ, ‘ನಡೆದಾಡುವ ದೇವರು’ ‘ಕರ್ನಾಟಕ ರತ್ನ’ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರಿಗೆ ಸಮರ್ಪಿಸಿದ ‘ವಚನ ಗುರುವಂದನೆ’ ಒಂದು ಐತಿಹಾಸಿಕ ಕಾರ್ಯಕ್ರಮ.
ಪರಮಪೂಜ್ಯರ ಶತಮಾನೋತ್ಸವದ ಹುಟ್ಟುಹಬ್ಬದ ಅಂಗವಾಗಿ ರಾಜಧಾನಿ ಬೆಂಗಳೂರಿನ ಬಸವೇಶ್ವರನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಜನಸ್ತೋಮ, ಇಕ್ಕೆಲಗಳಲ್ಲಿ ನೂರಕ್ಕೂ ಹೆಚ್ಚು ಹರಗುರುಚರಮೂರ್ತಿಗಳು ಹಾಗೂ ಗಣ್ಯಮಾನ್ಯರುಗಳು, ವಿಶಾಲ ವೇದಿಕೆಯ ಮೇಲೆ ಪರಮಪೂಜ್ಯರು ಆಸೀನರಾಗಿ ಕನ್ನಡ ನಾಡಿನ ಪ್ರಖ್ಯಾತ ಗಾಯಕರುಗಳು ವಚನಗಳನ್ನು ಹಾಡುವುದರ ಮೂಲಕ ಸಲ್ಲಿಸಿದ ‘ವಚನ ಗುರುವಂದನೆ’ ಬಳಗದ ಮಹತ್ಕಾರ್ಯ ಎಂದು ಭಾವಿಸಿದ್ದೇವೆ.
ಕನ್ನಡ ನಾಡಿನ ಉಭಯಗಾನ ವಿಶಾರದೆ ಡಾ|| ಶ್ಯಾಮಲಾ ಭಾವೆಯವರಂತಹ ಹಿರಿಯ ವಿದುಷಿಗಳು, ಅಂತರರಾಸ್ಟ್ರೀಯ ಖ್ಯಾತಿಯನ್ನೊತ್ತ ಕ್ಲಾರಿಯೋನೆಟ್ ವಾದಕರಾದ ಪಂಡಿತ ನರಸಿಂಹಲು ವಡವಾಟಿ ಅವರು, ಆಕಾಶವಾಣಿಯಲ್ಲಿ ಮೊದಲಿಗೆ ವಚನ ಗಾಯನವನ್ನು ಪ್ರಸ್ತುತಪಡಿಸಿದ ಹಿರಿಯ ರಾಗಸಂಯೋಜಕರಾದ ಶ್ರೀ ಹೆಚ್.ಕೆ. ನಾರಾಯಣ ಅವರು, ರಾಯಚೂರಿನ ಪ್ರಖ್ಯಾತ ಗಾಯಕ ಶ್ರೀ ಸೂಗೂರೇಶ ಅಸ್ಕಿಹಾಳ್, ಕನ್ನಡದ ‘ಗಜಲ್ ದೊರೆ’ ಎಂದೇ ಖ್ಯಾತರಾದ ಪಂಡಿತ ರವೀಂದನಾಥ ಹಂದಿಗನೂರು, ಮಧುರಧ್ವನಿಯ ಪಂಡಿತ ವಾಗೀಶ್ ಭಟ್, ಹಿರಿಯ ಗಾಯಕರಾದ ಶ್ರೀ ನಾರಾಯಣರಾವ್ ಮಾನೆ, ಕನ್ನಡದ ಕೋಗಿಲೆ ಶ್ರೀ ಮತಿ ಕಸ್ತೂರಿ ಶಂಕರ್, ಸಿರಿಕಂಠವನ್ನೊತ್ತ ಮಧುರ ಗಾಯಕ ಪಂಡಿತ ರವೀಂದ್ರ ಸೊರಗಾವಿ, ಭಾವಗೀತೆಗಳಿಗೆ ಖ್ಯಾತರಾದ ಶ್ರೀ ಬಿ.ಜೆ. ಭರತ್, ತರುಣ ಗಾಯಕ ಶ್ರೀ ಮೃತ್ಯುಂಜಯ, ಧಾರವಾಹಿ ಕಲಾವಿದೆ - ಗಾಯಕಿ ಶ್ರೀಮತಿ ರಮ್ಯಾ ವಶಿಷ್ಟ, ಇಂದು ಚಲನಚಿತ್ರರಂಗದಲ್ಲಿ ಖ್ಯಾತನಾಮವಾಗಿರುವ ಕುಮಾರಿ ಚೈತ್ರ, ಹಿರಿಯ ಗಾಯಕಿ ಶ್ರೀಮತಿ ಅರುಣ ಚಂದ್ರಶೇಖರ್, ಮೈಸೂರಿನ ಯುವ ಕಲಾವಿದೆ ಶ್ರೀದೇವಿ ಕುಳೇನೂರು. . . . . ಹೀಗೆ ಇಪ್ಪತ್ತನಾಲ್ಕು ಗಾಯಕರುಗಳು ವಚನಗಳನ್ನು ಹಾಡುವುದರ ಮೂಲಕ ‘ವಚನ ಗುರುವಂದನೆ’ಯನ್ನು ಸಲ್ಲಿಸಿದರು. ಖ್ಯಾತ ತಬಲವಾದಕರಾದ ಶ್ರೀ ಸತೀಶ್ ಹಂಪಿಹೊಳಿಯವರ ವಾದ್ಯಸಂಯೋಜನೆಯಲ್ಲಿ ಪಂಡಿತ ದೇವೇಂದ್ರಕುಮಾರ ಮುಧೋಳ್ ಹಾಗೂ ಹಿರಿಯ ರಂಗಭೂಮಿ ಕಲಾವಿದ ಶ್ರೀ ಪರಮಶಿವಯ್ಯನವರುಗಳ ಹಾರ್ಮೊನಿಯಂ ವಾದನ, ಶ್ರೀ ಶಿವುರವರ ಕೊಳಲುವಾದನಗಳ ಸಂಮಿಶ್ರಣದಲ್ಲಿ ‘ವಚನ ಗುರುವಂದನೆ’ ಎಲ್ಲರ ಮನಸೂರೆಗೊಂಡಿತು. ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ಪಂಡಿತ ನರಸಿಂಹಲು ವಡವಾಟಿಯವರು ನುಡಿಸಿದ ‘ಅಕ್ಕ ಕೇಳವ್ವ’ ಕ್ಲಾರಿಯೋನೆಟ್ ವಾದನಕ್ಕೆ ಪರಮಪೂಜ್ಯರೇ ತಾಳವನ್ನು ಹಾಕಿದ್ದು ಬಳಗಕ್ಕೆ ಅಮೃತಸಿಂಚನವನ್ನುಂಟು ಮಾಡಿತು.