ವಚನ ಶ್ರಾವಣ

ಕವಿ ಕಾವ್ಯ ಶ್ರಾವಣ – ವಚನ ಶ್ರಾವಣ

ಬಳಗದ ಮತ್ತೊಂದು ವಿಶಿಷ್ಟ ಕಾರ್ಯಕ್ರಮ ಕವಿ ಕಾವ್ಯ ಶ್ರಾವಣ. ಶ್ರಾವಣ ಮಾಸದಲ್ಲಿ ೩೦ ದಿನಗಳ ಕಾಲ ೩೦ ವಿವಿಧ ಸ್ಥಳಗಳಲ್ಲಿ ಸಂಜೆ ೬ ರಿಂದ ೮ ರವರೆಗೆ ಸಾಮೂಹಿಕ ಪ್ರಾರ್ಥನೆ, ಒಂದಷ್ಟು ವಚನ ಗಾಯನ, ಜೊತೆಗೆ ಜನಪದ - ಸುಗಮ ಸಂಗೀತ ಮತ್ತು ಒಬ್ಬ ಕವಿಯ ಸ್ಮರಣೆಯನ್ನು ಎಂಟು ವರ್ಷ ನಡೆಸಿದೆ. ನಿರಂತರವಾಗಿ ೩೦ ದಿನಗಳೂ ನಡೆಯುವ ನಮ್ಮ ಈ ಕಾರ್ಯಕ್ರಮ ಮನೆಯಿಂದ ಮನಕ್ಕೆ ಕನ್ನಡ ಸಂಸ್ಕೃತಿಯನ್ನು ಹರಡುತ್ತಿದೆ. “ಪಂಪನಿಂದ ಕುವೆಂಪುವರೆಗೆ” ಮಾಲಿಕೆಯಡಿ ಕನ್ನಡದ ಪ್ರಸಿದ್ಧ ಕವಿಗಳು - ವಚನಕಾರರು - ದಾಸಶ್ರೇಷ್ಟರು -ತತ್ವಪದಕಾರರು - ಆಧುನಿಕ ಕವಿಗಳ ಪರಿಚಯವನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟು, ಅದರೊಂದಿಗೆ ಸಂಗೀತದ ಮಧುರತೆಯೊಂದಿಗೆ ಮನೆಯಿಂದ ಮನೆಗೆ; ಮನದಿಂದ ಮನಕ್ಕೆ ಸಂಸ್ಕೃತಿಯ ಸಿಂಚನ ಉಣಬಡಿಸಿದೆ. ಆಸಕ್ತ ಮನೆಯಂಗಳದಲ್ಲಿ ಸಮಾಹಿತರಾಗಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಧ್ಯಾನ, ಸಾಮೂಹಿಕ ಪ್ರಾರ್ಥನೆ, ಗೀತ ಗಾಯನ, ವಚನ ಸಂವಾದ – ವ್ಯಾಖ್ಯಾನಗಳ ಮೂಲಕ ಈಗ ವಚನ ಶ್ರಾವಣ ನಡೆಯುತ್ತಿದೆ. ಮನೆ ಮನವೂ ಅನುಭವ ಮಂಟಪವಾಗಬೇಕು ಎಂಬ ಸತ್ ಸಂಕಲ್ಪ ನಮ್ಮದಾಗಿದೆ.

ವಚನಕಾರರನ್ನು ಪರಿಚಯಿಸುವ, ವಚನ ಸಂಸ್ಕೃತಿಯನ್ನು ಪಸರಿಸುವ ಪ್ರಧಾನ ಆಶಯವುಳ್ಳ ಈ ಕಾರ್ಯಕ್ರಮ ಸಂಗೀತದೊಂದಿಗೆ ಸಾಹಿತ್ಯದ ಕಂಪನ್ನು, ವಚನಕಾರರ ವಿಚಾರಗಳನ್ನು, ವಚನಗಳ ಸಾರಸತ್ವವನ್ನು ಆಸಕ್ತರ ಮನೆಯಂಗಳದಲ್ಲಿ ಉಣಬಡಿಸುತ್ತಿದ್ದು, ಸಂಗೀತ - ಸಾಹಿತ್ಯ – ದಾಸೋಹದೊಂದಿಗೆ ಸಂಪನ್ನತೆಗೊಳ್ಳುವ ಈ ಕವಿ ಕಾವ್ಯ ಶ್ರಾವಣ, ಇತ್ತೀಚಿನ ವರ್ಷಗಳಲ್ಲಿ ವಚನ ಶ್ರಾವಣವಾಗಿ ರೂಪಾಂತರಗೊಂಡು ವಚನಕಾರರ ವಿಚಾರಕ್ರಾಂತಿಯನ್ನು ಬಿತ್ತುತ್ತಿದೆ. ನಾಡಿನ ಶ್ರೇಷ್ಠ ವಿದ್ವಾಂಸರುಗಳಾದ ಡಾ|| ಎಂ. ಚಿದಾನಂದಮೂರ್ತಿ, ಡಾ|| ಸಾ.ಶಿ. ಮರುಳಯ್ಯ, ಕವಿ ಜಯಂತ ಕಾಯ್ಕಿಣಿ, ಪುಸ್ತಕ – ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ರಂಗಸಂಘಟಕ ಶ್ರೀನಿವಾಸ ಜಿ, ಕಪ್ಪಣ್ಣ, ವಾಗ್ಮಿ ಕವಿತಾಕೃಷ್ಣ, ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್, ರಂಗಕರ್ಮಿ ನಾಗರಾಜಮೂರ್ತಿ, ಅಂಕಣಕಾರ ಎಸ್. ಷಡಕ್ಷರಿ ಮೊದಲಾದವರಿಂದ ಮೊದಲ್ಗೊಂಡು ಯುವ ಪ್ರತಿಭೆಗಳಾದ ಗುಂಡೀಗೆರೆ ವಿಶ್ವನಾಥ್, ಪ್ರದೀಪ್ ಮಾಲ್ಗುಡಿ . . . ಕವಿ ಕಾವ್ಯ ಶ್ರಾವಣದಲ್ಲಿ ಉಪನ್ಯಾಸದ ಚಿಲುಮೆಯನ್ನು ಹರಿಸಿದ್ದಾರೆ. ಕರ್ನಾಟಕ ಸಂಗೀತ ಅಕಾಡೆಮಿ ಅಧ್ಯಕ್ಷರಾಗಿದ್ದ ಪಂ. ನರಸಿಂಹಲು ವಡವಾಟಿ ಅವರಿಂದ ಮೊದಲ್ಗೊಂಡು ಪಂ. ದೇವೇಂದ್ರಕುಮಾರ ಮುಧೋಳ್, ಪಂ. ನಾಗಲಿಂಗಯ್ಯ ವಸ್ತ್ರದಮಠ, ಪಂ. ರವೀಂದ್ರ ಸೊರಗಾವಿಯವರಿಂದ ಮೊದಲ್ಗೊಂಡು ಕು|| ಚೇತನಾ ಮುಧೋಳ್‌ರವರೆಗೆ ವಚನ ಗಾಯನ ಸುಧೆ ಹರಿದಿದೆ..