ಸಂಸ್ಥಾಪಕರ ದಿನಾಚರಣೆ

ಸಂಸ್ಥಾಪಕರ ದಿನಾಚರಣೆ

ವಚನಜ್ಯೋತಿ ಬಳಗದ ಸಂಸ್ಥಾಪಕರಾದ ಲಿಂಗೈಕ್ಯ ಪಂಡಿತ ಕೆ.ಪಿ. ಶಿವಲಿಂಗಯ್ಯನವರನ್ನು ಸ್ಮರಿಸುವ ಕಾರ್ಯಕ್ರಮ ಸಂಸ್ಥಾಪಕರ ದಿನಾಚರಣೆ. ಕನ್ನಡ ಪಂಡಿತರು – ಕವಿಗಳು - ಸಾಹಿತಿಗಳು – ಅಧ್ಯಾಪಕರು – ವಾಗ್ಮಿಗಳು – ಸಂಪಾದಕರು – ಪ್ರಾಚಾರ್ಯರು - ವ್ಯಾಖ್ಯಾನಕಾರರೂ ಅಗಿದ್ದ ಪಂಡಿತ ಕೆ.ಪಿ. ಶಿವಲಿಂಗಯ್ಯನವರ ನೆನಪಿನಲ್ಲಿ “ಶಿವಲಿಂಗ ಪ್ರಶಸ್ತಿ”ಯನ್ನು ಸ್ಥಾಪಿಸಲಾಗಿದ್ದು, ಹತ್ತು ಸಾವಿರ ರೂಪಾಯಿಗಳು ಮತ್ತು ಫಲತಾಂಬೂಲ ಸ್ಮರಣಿಕೆಯನ್ನು ಒಳಗೊಂಡಿದೆ. ‘ಶಿವಲಿಂಗ ಪ್ರಶಸ್ತಿ’ಯನ್ನು ಕನ್ನಡದ ಚಿಂತಕರು - ಮುತ್ಸದಿಗಳು - ಸಾಹಿತಿಗಳು - ಸಂಸ್ಕೃತಿಯ ಹರಿಕಾರರೂ ಆದ ಹಿರಿಯರುಗಳಿಗೆ ಪ್ರದಾನ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರಗಳ ಅಧ್ಯಕ್ಷರಾಗಿ ಸಾರ್ಥಕ ಸೇವೆ ಸಲ್ಲಿಸಿರುವ ನಾಡೋಜ ಶ್ರೀ ಜಿ. ನಾರಾಯಣ ಅವರಿಗೆ ಪ್ರಥಮ ಶಿವಲಿಂಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಂತೆಯೇ ಬೆಳಗಾವಿಯಲ್ಲಿ ಸತತ ಮೂವತ್ತು ವರ್ಷಗಳ ಕಾಲ ಕನ್ನಡ ಪತ್ರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ‘ಲೋಕದರ್ಶನ’ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಶ್ರೀಎಂ.ಬಿ. ದೇಸಾಯಿಯವರು, ‘ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ’ ಎಂಬ ಗೀತೆಯನ್ನು ರಚಿಸಿ ‘ಸರ್ವಜ್ಞ’ ಚಲನಚಿತ್ರವನ್ನು ಕನ್ನಡಿಗರಿಗೆ ಸಮರ್ಪಿಸಿದ ಹಿರಿಯ ಸಾಹಿತಿ ಶ್ರೀ ಎಂ. ನರೇಂದ್ರಬಾಬುರವರು, ಕನ್ನಡ ಪಂಡಿತರಾಗಿ - ಉತ್ತಮ ಅಧ್ಯಾಪಕರಾಗಿ - ‘ಸಿದ್ಧಗಂಗಾ’ ಪತ್ರಿಕೆಯ ಸಂಪಾದಕರಾಗಿ ಕನ್ನಡ ತೇರನ್ನೆಳೆದಿರುವ ಪಂಡಿತ ಚೆನ್ನಪ್ಪ ಎರೇಸೀಮೆ ಅವರು, ಪ್ರಾಚಾರ್ಯರೂ - ಸಂಸ್ಕೃತಿಯ ಪರಿಶೋಧಕರು - ಸಂಶೋಧಕರೂ ಆದ ಡಾ|| ಎಂ.ಜಿ. ನಾಗರಾಜ್ ಅವರು, ಹಿರಿಯ ವಿದ್ವಾಂಸರು - ನಿಘಂಟುಕಾರರು - ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾರ್ಥಕ ಕಾರ್ಯ ಮಾಡಿರುವ ಪ್ರೊ. ಎನ್. ಬಸವಾರಾಧ್ಯರು, ವಿಜ್ಞಾನದ ಪ್ರಾಧ್ಯಾಪಕರಾಗಿ ಬಸವತತ್ವವನ್ನು ಹಚ್ಚಿಕೊಂಡು ಬಸವ ಸಮಿತಿಯಲ್ಲಿ ಸಾರ್ಥಕ ಕಾರ್ಯಗಳನ್ನು ನಡೆಸಿರುವ ಪ್ರೊ. ಬಿ. ವಿರೂಪಾಕ್ಷಪ್ಪನವರು, ಸಿರಿವಂತಿಕೆಯಲ್ಲಿ ಮಿಂದಿದ್ದರೂ ಸಂಸ್ಕೃತಿಯಲ್ಲಿ ಸಲ್ಲುತ್ತಿರುವ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ತರುಣ ತೇಜಸ್ಸುಳ್ಳ ಶ್ರೀ ದಿಬ್ಬೂರು ಸಿದ್ಧಲಿಂಗಪ್ಪನವರು, ಹಳ್ಳಿ ಹಳ್ಳಿಗೆ ಹಾಗೂ ನಗರದ ಎಲ್ಲ ಭಾಗಗಳಲ್ಲಿ ಕನ್ನಡದ ಸಿರಿವಂತಿಕೆಯನ್ನು ಸಾರುತ್ತಾ ಬಂದಿರುವ ಪ್ರಚಂಡ ವಾಗ್ಮಿಗಳಾದ ಶ್ರೀ ಹೀ.ಚಿ. ಶಾಂತವೀರಯ್ಯನವರು, ತ್ರಿಭಾಷಾ ವಿದ್ವಾಂಸರಾಗಿ ಕನ್ನಡ ಭಾಷೆಯ ಸೊಡಗನ್ನು ಹೆಚ್ಚಿಸಿರುವ ಪಂಡಿತ ಷಣ್ಮುಖಯ್ಯ ಅಕ್ಕೂರ್ಮಠ್ರವರು, ಸಮಗ್ರ ಕನ್ನಡ ನಾಡಿನಲ್ಲಿ ಗೀತ ಗಾಯನದ ಮೂಲಕ ಕನ್ನಡ ಪಸರಣ ಮಾಡಿರುವ ಹಿರಿಯ ಗಾಯಕ ಶ್ರೀ ನಾರಾಯಣರಾವ್ ಮಾನೆಯವರು, ಜನಪದ ಗೀತ ಗಾಯನದ ಮೂಲಕ ವಿಖ್ಯಾತರಾಗಿರುವ ಶ್ರೀ ಅಪ್ಪಗೆರೆ ತಿಮ್ಮರಾಜು - ಈ ಮಹಾನುಭಾವರುಗಳಿಗೆ ‘ಶಿವಲಿಂಗ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ.