ಬಸವ ಉತ್ಸವ

ಬಸವ ಉತ್ಸವ - "ಬಸವಣ್ಣನೊಡನೆ ಹೆಜ್ಜೆ ಹಾಕೋಣ ಬನ್ನಿ"

ಭಕ್ತಿ ಭಂಢಾರಿ, ದ್ವಿತೀಯ ಶಂಭು, ಸದ್ಭಕ್ತಿ ಸೂರೆಗಾರ, ಪ್ರಥಮ ಪ್ರಮಥಾಚಾರ್ಯ, ದಂಡನಾಥ ಚೂಡಾಮಣಿ ತತ್ವಸಾಗರ, ಅಷ್ಟಾವರಣ ಸ್ವರೂಪಿ, ವಚನ ವಾಙ್ಮಯಾಚಾರ್ಯ, ಸರ್ವಾಂಗ ಲಿಂಗಮೂರ್ತಿ, ಮಂತ್ರಮೂರ್ತಿ, ವಿಶ್ವದ ಮೊಟ್ಟಮೊದಲ ಸಮಾಜವಾದಿ, ಶಿವಾಚಾರ ಚಕ್ರವರ್ತಿ, ದಲಿತೋದ್ಧಾರಕ, ಸರ್ವಾಚಾರ ಸಂಪನ್ನ, ಮಹಾ ಮಾನವತಾವಾದಿ, ಸಮಾನತೆಯ ಹರಿಕಾರ, ಕಾಯಕ ಯೋಗಿ, ದಾಸೋಹ ಪ್ರೇಮಿ, ಯುಗ ಪ್ರವರ್ತಕ, ವರ್ಗವರ್ಣ ನಿರ್ಮೂಲನಕಾರ, ವಿಚಾರಕ್ರಾಂತಿಯ ನಿರ್ಮಾಪಕ, ಯುಗದ ಉತ್ಸಾಹ, ಅನುಭವ ಮಂಟಪ ಶಿಲ್ಪಿ, ಪರಮಗುರು, ಕನ್ನಡದ ಅಣ್ಣ, ಕನ್ನಡ ಭಾಷೋದ್ಧಾರಕ, ಕನ್ನಡ ಕುಲೋದ್ಧಾರಕ, ಧಾರ್ಮಿಕ - ಸಾಮಾಜಿಕ - ಸಾಹಿತ್ಯಿಕ - ವೈಚಾರಿಕ ಕ್ರಾಂತಿಗಳನ್ನು ಹುಟ್ಟು ಹಾಕಿದ ವಿಶ್ವದ ಶ್ರೇಷ್ಠ ದಾರ್ಶನಿಕ, ಕರ್ನಾಟಕದ ಸಾಂಸ್ಕೃತಿಕ ನಾಯಕ "ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ" ಅಂಗವಾಗಿ ಶ್ರೀಬಸವೇಶ್ವರ ಉತ್ಸವಮೂರ್ತಿ ಹಾಗೂ ವಚನ ಸಂಪುಟಗಳನ್ನೊತ್ತ "ಬಸವ ಉತ್ಸವ"ವನ್ನು ಪ್ರತಿವರ್ಷ ಬಸವ ಜಯಂತಿಯಂದು ಮುಂಜಾನೆ ಆರು ಗಂಟೆಗೆ ಆರಂಭಿಸಿ ರಾಜಧಾನಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಸಂತಸ ಸಂಭ್ರಮಗಳಿಂದ ನಡೆಸಲಾಗುವುದು. "ಬಸವಣ್ಣನೊಡನೆ ಹೆಜ್ಜೆ ಹಾಕೋಣ ಬನ್ನಿರಿ" ಎಂಬ ಉದ್ಘೋಷಣೆಯೊಂದಿಗೆ ಸಾಹಿತಿಗಳು - ಕಲಾವಿದರು - ವಿದ್ವಾಂಸರು - ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು - ವಿದ್ಯಾರ್ಥಿಗಳು ಬಸವ ಉತ್ಸವದಲ್ಲಿ ಹೆಜ್ಜೆ ಹಾಕುವುದು ಬಸವ ಉತ್ಸವದ ವಿಶೇಷವಾಗಿದೆ. ಮುಂಜಾನೆ ವಿಜಯನಗರದಿಂದ ಆರಂಭಗೊಂಡ ಬಸವ ಉತ್ಸವವು ರಾಜಧಾನಿಯ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಆಯ್ದ ವೃತ್ತಗಳಲ್ಲಿ ಕಲಾತಂಡಗಳ ಪ್ರದರ್ಶನ ನಡೆಸಿ, ಸಂಚಾರಿ ವಚನ ವಾಹಿನಿಯೊಂದಿಗೆ ವಚನಗಳನ್ನು ಹಾಡುತ್ತಾ, ವಚನ ಘೋಷಗಳನ್ನು ಜಯಕಾರ ಮೊಳಗಿಸುತ್ತಾ ಸಂಜೆ ಪ್ರತಿಷ್ಠಿತ ಮಹಾತ್ಮಗಾಂಧಿ ರಸ್ತೆಯಲ್ಲಿ ಸಮಾರೋಪಗೊಳ್ಳುವುದು ಬಸವ ಉತ್ಸವದ ವೈಶಿಷ್ಟ್ಯವಾಗಿದೆ.

ಪ್ರತಿವರ್ಷ ನಡೆಯುವ ಬಸವ ಉತ್ಸವ ತನ್ನ ವಿಶಿಷ್ಟತೆಯಿಂದ ಎಲ್ಲರನ್ನೂ ಆಕರ್ಷಿಸಿದೆ. ಮುತ್ತಿನ ಪಲ್ಲಕ್ಕಿಯಲ್ಲಿ ವಚನ ಸಂಪುಟದೊಂದಿಗೆ ಬಸವಣ್ಣನವರ ಉತ್ಸವಮೂರ್ತಿಗೆ ಸಾವಿರಾರು ಜನ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಮುಂಜಾನೆ ಆರು ಗಂಟೆಗೆ ವಿಜಯನಗರದಿಂದ ಆರಂಭಗೊಳ್ಳುವ ಬಸವ ಉತ್ಸವ ಹೊಸಹಳ್ಳಿ, ಹಂಪಿನಗರ, ಪ್ರಶಾಂತನಗರ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್, ಅನ್ನಪೂರ್ಣೇಶ್ವರಿನಗರ, ಡಿಗ್ರೂಪ್ ಲೇಔಟ್, ಕೆಂಗುಂಟೆ ವೃತ್ತ, ನಾಗರಬಾವಿ ಗ್ರಾಮ, ಅತ್ತಿಗುಪ್ಪೆ, ಮೈಸೂರು ರಸ್ತೆ, ಸಿರ್ಸಿ ವೃತ್ತ, ಚಾಮರಾಜಪೇಟೆ, ಬಸವನಗುಡಿ ಗಾಂಧಿಬಜಾರ್, ಜಯನಗರ, ಸಾರಕ್ಕಿ, ಜೆಪಿನಗರ, ಅರಕೆರೆ, ಬಿಟಿಎಂ ಲೇಔಟ್, ಹೆಚ್.ಎಸ್.ಆರ್. ಲೇಔಟ್, ಕೋರಮಂಗಲ, ವಿಲ್ಸನ್‌ಗಾರ್ಡನ್, ಪುರಭವನ, ಕೆಂಪೇಗೌಡ ರಸ್ತೆ, ಅರಮನೆ ರಸ್ತೆ, ಬಸವೇಶ್ವರ ವೃತ್ತಗಳ ಮೂಲಕ ಸಂಚರಿಸಿ ಸಂಜೆ ಏಳು ಗಂಟೆಗೆ ಮಹಾತ್ಮಗಾಂಧಿ ರಸ್ತೆಯ ಪ್ರಜಾವಾಣಿ ಕಛೇರಿ ಎದುರು ಸಮಾರೋಪಗೊಳ್ಳುತ್ತದೆ. ನಾಡಿನ ವಿಶಿಷ್ಟ ಕಲೆಗಳಾದ ವೀರಗಾಸೆ, ನಂದಿಧ್ವಜ, ನಂದಿಕೋಲು, ಪೂಜಾ ಕುಣಿತ, ಡೊಳ್ಳು ಕುಣಿತ ಮೊದಲಾದ ಕಲಾತಂಡಗಳೊಂದಿಗೆ ನಾಡಿನ ಯುವ ಪ್ರತಿಭಾವಂತ ಗಾಯಕರುಗಳ ವಚನ ವಾಹಿನಿಯು ವಚನಗಳ ಸಾರಸೌರಭವನ್ನು ಪಸರಿಸುತ್ತಾ ಬಸವ ಜಯಘೋಷಗಳೊಂದಿಗೆ ಎಲ್ಲರ ಚಿತ್ತಾಕರ್ಷಿಸುತ್ತದೆ. ವಿದ್ವಾಂಸರುಗಳಾದ ಡಾ|| ಎಂ. ಚಿದಾನಂದಮೂರ್ತಿ, ಡಾ. ಗೊ.ರು. ಚನ್ನಬಸಪ್ಪ, ಡಾ|| ಸಾ.ಶಿ. ಮರುಳಯ್ಯ, ಪ್ರೊ. ಎನ್. ಬಸವಾರಾಧ್ಯ, ಡಾ|| ಎಸ್. ವಿದ್ಯಾಶಂಕರ್, ಡಾ|| ಬಿ.ಎಸ್. ಸ್ವಾಮಿ, ಡಾ|| ಎಂ.ಜಿ. ನಾಗರಾಜ್ ಮೊದಲಾದವರು ಹೆಜ್ಜೆ ಹಾಕುತ್ತಾ ನಡೆದದ್ದು ಬಸವ ಉತ್ಸವಕ್ಕೆ ಮೆರುಗು ತಂದುಕೊಟ್ಟಿದ್ದಾರೆ. "ಬಸವ ಉತ್ಸವ" ದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಉಚಿತ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು, ರಾಜಧಾನಿಯ ಹಲವು ಸಂಘಟನೆಗಳ ಪದಾಧಿಕಾರಿಗಳು - ಸದಸ್ಯರು, ಕನ್ನಡ ಕಾರ್ಯಕರ್ತರು ಉತ್ಸಾಹಭರಿತರಾಗಿ ಭಾಗವಹಿಸುತ್ತಾರೆ.