ಬಸವಣ್ಣ

ಬಸವಣ್ಣ

ನಾಡಿನಲ್ಲಿ ವಿಚಾರಕ್ರಾಂತಿಯನ್ನು ಬಿತ್ತಿದ, ಸರ್ವಸಮಾನತೆಯನ್ನು ಹರಡಿದ, ವರ್ಗವರ್ಣವನ್ನು ನಿರ್ಮೂಲನೆ ಮಾಡಿದ, ಸ್ತ್ರೀಗೆ ಸಮಾನತೆ ನೀಡಿದ, ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು - ತಿರುವನ್ನು ನಿರ್ಮಿಸಿದ, ಕಾಯಕದ ಪರಿಕಲ್ಪನೆಯನ್ನು ಬಲವಾಗಿ ಮಂಡಿಸಿ ಆಚರಿಸಿದ, ದಾಸೋಹಭಾವನ್ನು ಎಲ್ಲೆಡೆ ಹರಡಿದ ಭಕ್ತಿ ಭಂಢಾರಿ, ದ್ವಿತೀಯ ಶಂಭು, ಸದ್ಭಕ್ತಿ ಸೂರೆಗಾರ, ಪ್ರಥಮ ಪ್ರಮಥಾಚಾರ್ಯ, ಮಂತ್ರಮೂರ್ತಿ, ದಂಡನಾಥ ಚೂಡಾಮಣಿ, ತತ್ವಸಾಗರ, ಅಷ್ಟಾವರಣ ಸ್ವರೂಪಿ, ವಚನ ವಾಙ್ಮಯಾಚಾರ್ಯ, ಸರ್ವಾಂಗ ಲಿಂಗಮೂರ್ತಿ, ಶಿವಾಚಾರ ಚಕ್ರವರ್ತಿ, ದಲಿತೋದ್ಧಾರಕ, ಸರ್ವಾಚಾರ ಸಂಪನ್ನ, ವಿಶ್ವದ ಮೊಟ್ಟಮೊದಲ ಸಮಾಜವಾದಿ, ಮಹಾ ಮಾನವತಾವಾದಿ, ಸಮಾನತೆಯ ಹರಿಕಾರ, ಕಾಯಕ ಯೋಗಿ, ದಾಸೋಹ ಪ್ರೇಮಿ, ಯುಗ ಪ್ರವರ್ತಕ, ವರ್ಗವರ್ಣ ನಿರ್ಮೂಲನಕಾರ, ವಿಚಾರಕ್ರಾಂತಿಯ ನಿರ್ಮಾಪಕ, ಅನುಭವ ಮಂಟಪ ಶಿಲ್ಪಿ, ಪರಮಗುರು, ಕನ್ನಡದ ಅಣ್ಣ, ಕನ್ನಡ ಭಾಷೋದ್ಧಾರಕ, ಕನ್ನಡ ಕುಲೋದ್ಧಾರಕ, ಧಾರ್ಮಿಕ - ಸಾಮಾಜಿಕ - ಸಾಹಿತ್ಯಿಕ - ವೈಚಾರಿಕ ಕ್ರಾಂತಿಗಳನ್ನು ಹುಟ್ಟು ಹಾಕಿದ ವಿಶ್ವದ ಶ್ರೇಷ್ಠ ದಾರ್ಶನಿಕ, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಣ್ಣ ಜಗದಣ್ಣ ವಿಶ್ವಗುರು ಬಸವಣ್ಣ

ಬಸವಣ್ಣನವರ ಜನನವೇ ಒಂದು ವಿಸ್ಮಯಕಾರಿ ವಿಶ್ವಘಟನೆ; ವಿಶ್ವಚೈತನ್ಯದ ಪೂರ್ಣಾವತಾರವೆಂದು ಹೇಳಬಹುದು. ದೇಶದ ಸರ್ವಯೋಗ ಕ್ಷೇಮಕ್ಕಾಗಿ, ಸಕಲ ಜೀವಾವಳಿಯ ಲೇಸಿಗಾಗಿ, ಬಿದ್ದವರ ನೊಂದವರ ಏಳ್ಗೆಗಾಗಿ, ಸರ್ವಸಮಾನತೆಗಾಗಿ, ದುಃಖ ದಾರಿದ್ರ್ಯ ಅಜ್ಞಾನ ಮೌಢ್ಯಗಳ ವಿನಾಶಕ್ಕಾಗಿ ಅವರು ರೂಪಿಸಿ, ಕಾರ್ಯಗತಗೊಳಿಸಿದ ಸಮಗ್ರ ಕ್ರಾಂತಿ ಅಪ್ರತಿಮ ಹಾಗೂ ಜದ್ಭವ್ಯ. ಬಾಲ್ಯದಲ್ಲಿ ಆದ್ಯಾತ್ಮಸಿದ್ಧಿಯ ಶಿಖರವನ್ನೇರಿ, ತಾರುಣ್ಯದಲ್ಲಿ ಅನ್ಯಾಯ ಅಧರ್ಮಗಳ ಹುತ್ತವಾಗಿದ್ದ ಹಳೆಯ ಮತದ ವಿರುದ್ದವಾಗಿ ಬಂಡೆದ್ದು, ಜಗತ್ತಿನ ಎಲ್ಲ ಮತಗಳ ಗುಣಾಂಶಗಳ ಸಾರಗ್ರಾಹಿ ಎನ್ನಬಹುದಾದ, ವಿಶ್ವಸಂಸ್ಕೃತಿಯ ಮುಡಿಯ ಮಾಣಿಕ್ಯವೆನ್ನಬಹುದಾದ, ಹೊಸ ಧರ್ಮವನ್ನು ಸಂಸ್ಥಾಪಿಸಿದ, ಹೊಸ ಸಂಸ್ಕೃತಿಯನ್ನು ರೂಪಿಸಿದ ಮಾನವೀಯ ಗುಣನಿಧಿ, ಬಹುಮುಖ ಪ್ರತಿಭೆಯ ಏಕಮಾತ್ರ ಕ್ರಾಂತಿವೀರ, ಕರುಣಮೂರ್ತಿ ಅವರು. ಆ ಅದ್ಭುತ ವ್ಯಕ್ತಿಯ ಸೆಳವಿಗೆ, ಕಾಂತ-ಶಕ್ತಿಗೆ ದೇಶದ ನಾನಾ ಭಾಗಗಳ ಸಾಧಕರು ಶರಣಾದದ್ದು, ಅವರಿದ್ದ ಕಡೆಯೇ ನೆರೆದದ್ದು ಬಸವಣ್ಣನ ಮಹಾವ್ಯಕ್ತಿತ್ವಕ್ಕೆ ನಿದರ್ಶನ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಯೂ, ಕಂಪ್ಯೂಟರ್ ಯುಗದಲ್ಲಿಯೂ ಬಸವಣ್ಣನ ತತ್ವಗಳು ಅನುಕರಣೀಯ, ಮತ್ತು ಮಾರ್ಗದರ್ಶನೀಯವಾದುದು. ಅಣ್ಣನ ಒಂದೊಂದು ವಚನಗಳು ಬಾಳದೀವಿಗೆ.