ಕರ್ನಾಟಕದ ಇತಿಹಾಸದಲ್ಲಿ ವಚನ ಚಳವಳಿ ಒಂದು ಅಪೂರ್ವ ಘಟನೆ, ವಚನ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದ ಎಲ್ಲ ವರ್ಗ, ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಕೊಂಡಿದ್ದ ವ್ಯಕ್ತಿ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಚಳವಳಿಯ ಸೃಷ್ಟಿಯೆನಿಸಿದ ವಚನಗಳು ಜಾಗತಿಕ ಸಾಹಿತ್ಯದ ಮಹತ್ವಪೂರ್ಣ ಭಾಗವೆನಿಸಿವೆ.
ನಡೆದಂತೆ ನುಡಿದ ಆತ್ಮಸಾಕ್ಷಿಯ ವಾಣಿ “ವಚನ”ವನ್ನು ಬಸವಣ್ಣನವರ ನೇತೃತ್ವದಲ್ಲಿ ನೂರಾರು ವಚನಕಾರರು ನಮಗೆ ನೀಡಿದ್ದಾರೆ. ಭರತಖಂಡದ ಪ್ರಥಮ ಪ್ರಜಾ ಸಾಹಿತ್ಯವಾಗಿರುವ ವಚನ ವಾಜ್ಞಯ ನಮ್ಮ ಪರಂಪರೆಯ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಸಾಹಿತ್ಯಕ್ಕೆ ಸಾಹಿತ್ಯ, ಶಾಸ್ತ್ರಕ್ಕೆ ಶಾಸ್ತ್ರ, ಚಳವಳಿಗೆ ಚಳವಳಿಯಾಗಿರುವ ವಚನ ವಾಜ್ಞಯ ನಮ್ಮ ಪರಂಪರೆಯ ಅಪೂರ್ವ ಸೃಷ್ಟಿಯಾಗಿದೆ.
ಇಂತಹ ಅಪೂರ್ವ ಸಾಂಸ್ಕøತಿಕ ಸೃಷ್ಟಿಯನ್ನು ಸ್ಪರ್ಧಾತ್ಮಕ ಜಗತ್ತಿನ ಈ ಕಾಲಮಾನದಲ್ಲಿ, ತಾಂತ್ರೀಕರಣ ಮತ್ತು ಜಾಗತೀಕರಣದಲ್ಲಿ ಮುಳುಗಿಹೋಗಿರುವ ನಮ್ಮ ಜನತೆಗೆ, ವಿಶೇಷವಾಗಿ ಯುವ ಮತ್ತು ಎಳೆಯ ಕಿರಿಯರಲ್ಲಿ ಬಿತ್ತುವ, ತನ್ಮೂಲಕ ಉಲ್ಲಾಸಕರ ಸಾಂಸ್ಕೃತಿಕ ಪರಿಸರವನ್ನು ನಿರ್ಮಾಣ ಮಾಡುವ ಪ್ರಯತ್ನದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಘಟನೆ ವಚನಜ್ಯೋತಿ ಬಳಗ.
ಸ್ವತಃ ಕವಿಗಳು, ಕನ್ನಡ ಉಪನ್ಯಾಸಕರು, ವ್ಯಾಖ್ಯಾನಕಾರರು ಆಗಿದ್ದ ಲಿಂಗೈಕ್ಯ ಪಂಡಿತ ಕೆ.ಪಿ. ಶಿವಲಿಂಗಯ್ಯನವರು ಸ್ಥಾಪಿಸಿದ ಬಳಗವನ್ನು ಯುವ ಸಾಂಸ್ಕೃತಿಕ ಸಂಘಟಕ ಎಸ್. ಪಿನಾಕಪಾಣಿ ಮುನ್ನಡೆಸುತ್ತಿದ್ದಾರೆ; ಅವರೊಂದಿಗೆ ಸಮಾನಮನಸ್ಕ ಗೆಳೆಯರು - ಹಿರಿಯರು - ಗಾಯಕರು - ಕಲಾವಿದರು - ಸಾಹಿತಿಗಳು - ಉದ್ಯಮಿಗಳ ತಂಡವಿದೆ.